ಡೂಮಾ
ರಷ್ಯದಲ್ಲಿ 1906-17ರಲ್ಲಿ ಜಾರಿಯಲ್ಲಿದ್ದ ಸಂವಿಧಾನದ ಅಡಿಯಲ್ಲಿ ರಚಿತವಾಗಿದ್ದ ವಿಧಾನ ಸಭೆ; ವಿಧಾನ ಮಂಡಲದ ಕೆಳಮನೆ. ಡೂಮಾ ಎಂದರೆ ರಾಜ್ಯ ಪರ್ಯಾಲೋಚನ ಸಭೆ. eóÁರ್ 2ನೆಯ ನಿಕೊಲಾಸ್ ಇಷ್ಟವಿಲ್ಲದೆ ಹೊರಡಿಸಿದ 1905ರ ಅಕ್ಟೋಬರ್ 30ರ ಘೋಷಣೆಯಲ್ಲಿ ವಿಧಾನಸಭೆಯನ್ನು ನೀಡುವುದಾಗಿ ವಾಗ್ದಾನ ಮಾಡಿದ್ದ. 1906ರ ಮೇ 6ರ ಪರಿಷ್ಕøತ ಮೂಲಭೂತ ಕಾನೂನುಗಳ ಪ್ರಕಾರ ಡೂಮಾದ ಸಂವಿಧಾನಾತ್ಮಕ ಸ್ಥಾನಮಾನವೂ 1905ರಲ್ಲಿ ಹೊರಡಿಸಿದ ಆಜ್ಞೆಯಲ್ಲಿ ಡೂಮಾಗೆ ಚುನಾವಣೆಯ ವಿಧಾನವೂ ನಿರ್ಧಾರವಾಗಿದ್ದುವು. ಸಭೆಯ ಬಹು ಸಂಖ್ಯೆಯ ಪ್ರತಿನಿಧಿಗಳು ಮತದಾರರಿಂದ ಆಯ್ಕೆ ಹೊಂದಿದ ಚುನಾಯಕರಿಂದ ಚುನಾಯಿತರಾದರು. ಆಂತರಿಕ ಸಂಘಟನೆಯ ವಿಚಾರದಲ್ಲಿ ಡೂಮಾಗೆ ಸ್ವಾಯತ್ತತೆಯಿತ್ತು. ಆದರೆ ಅದರ ಅಧಿವೇಶನದ ಅವಧಿಯನ್ನು ನಿರ್ಧರಿಸುತ್ತಿದ್ದವನು ಚಕ್ರವರ್ತಿ. ಡೂಮಾಗೆ ಮಂತ್ರಿಗಳ ಮೇಲೆ ನಿಯಂತ್ರಣಾಧಿಕಾರ ಇರಲಿಲ್ಲ. ಅವರು ಚಕ್ರವರ್ತಿಗೆ ಜವಾಬುದಾರರಾಗಿದ್ದರು. ಡೂಮಾದ ಒಪ್ಪಿಗೆ ಪಡೆದ ವಿಧೇಯಕಗಳಿಗೆ ಮೇಲ್ಮನೆಯಾದ ರಾಜ್ಯಪರಿಷತ್ತಿನ ಒಪ್ಪಿಗೆ ದೊರಕಬೇಕಿತ್ತು. ಭಾಗಶಃ ಆಯ್ಕೆಯಾದ ಮತ್ತು ಭಾಗಶಃ ಚಕ್ರವರ್ತಿಯಿಂದ ನಾಮಕರಣ ಹೊಂದಿದ ಸದಸ್ಯರನ್ನೊಳಗೊಂಡಿದ್ದ ಪರಿಷತ್ತು ಸಾಮಾನ್ಯವಾಗಿ ಸಂಪ್ರದಾಯನಿಷ್ಠವಾಗಿತ್ತು. ಡೂಮಾದಲ್ಲಿ ಸಂವೈಧಾನಿಕ ಪ್ರಜಾಸತ್ತಾವಾದಿಗಳ ಮೇಲುಗೈ ಇತ್ತಾದರೂ ಅದು ವಾಮಪಕ್ಷೀಯರ ಕಡೆಗೆ ವಾಲುತ್ತಿತ್ತು. ಮೊದಲನೆಯ ಡೂಮಾ ತನ್ನ ಅಧಿಕಾರವನ್ನು ಮೀರಿ ನಡೆಯಿತೆಂದು ಚಕ್ರವರ್ತಿ ಅದನ್ನು ಬರಕಾಸ್ತು ಮಾಡಿದ. ಎರಡನೆಯ ಡೂಮಾ 1907ರ ಮಾರ್ಚ್ 7 ರಿಂದ ಜೂನ್ 16ರವರೆಗೆ ಅಧಿವೇಶನ ನಡೆಸಿತು. ಇದರ ಕಲಾಪಗಳಲ್ಲೂ ಸರ್ಕಾರದ ಮಧ್ಯಪ್ರವೇಶನ ಅಧಿಕವಾಗಿತ್ತು. 1907ರ ಜೂನ್ 16ರಂದು ಅದು ವಿಸರ್ಜನೆಗೊಂಡಿತು. ಮೂರನೆಯ ಡೂಮಾ 1907ರ ನವೆಂಬರ್ 14 ರಿಂದ ಜೂನ್ 22ರ ವರೆಗೆ, ತನ್ನ ಅವಧಿ ಪೂರ್ತಿ ಇತ್ತು. ನಾಲ್ಕನೆಯದು 1912ರ ನವೆಂಬರ್ 28ರಿಂದ 1917ರ ಮಾರ್ಚ್ 17ರ ವರೆಗೆ ನಡೆಯಿತು. ಒಂದನೆಯ ಮಹಾಯುದ್ಧ ಆರಂಭವಾದಾಗ ಎಲ್ಲ ಪಕ್ಷಗಳೂ ಆಡಳಿತದ ಪರವಾಗಿ ಒಂದುಗೂಡಿದುವು. ಆದರೆ ಆಡಳಿತ ಅದಕ್ಷತೆಯಿಂದ ವರ್ತಿಸಿತು. ಅದು ಸೈನ್ಯಕ್ಕೆ ನೆರವು ಒದಗಿಸಲಿಲ್ಲ. ಡೂಮಾ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗಲಿಲ್ಲ. ಮಧ್ಯಗಾಮಿಗಳ ಪ್ರಭಾವಕ್ಕೆ ಒಳಗಾಗಿದ್ದ ಅದು ಪ್ರತಿಗಾಮಿಗಳು ಹಾಗೂ ಪ್ರಗತಿವಾದಿಗಳ ವಿರೋಧಕ್ಕೆ ಒಳಗಾಗಿತ್ತು. ಒಂದು ಕ್ರಾಂತಿಯ ಸಮಯದಲ್ಲಿ ಹುಟ್ಟಿದ್ದ ಅದು ಇನ್ನೊಂದು ಕ್ರಾಂತಿಯ ಸಮಯದಲ್ಲಿ ಅವಸಾನ ಹೊಂದಿತು. ಅದು ಅನೇಕ ನ್ಯೂನತೆಗಳಿಗೆ ಒಳಗಾಗಿದ್ದರೂ ನಿರಂಕುಶ ಆಡಳಿತಕ್ಕೆ ಒಂದು ತಡೆಯಾಗಿ ಪರಿಣಮಿಸಿತ್ತು. ಪಾಶ್ಚಾತ್ಯ ಮಾದರಿಯ ಸಂಸದೀಯ ಆಡಳಿತದತ್ತ ರಷ್ಯದ ಮುನ್ನಡೆಯ ಪ್ರತೀಕವೆಂದು ಉದಾರವಾದಿಗಳು ಅದನ್ನು ಪರಿಗಣಿಸಿದ್ದರು.
(ಎಸ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ